ಮಂಗಳೂರು: ಜಿಲ್ಲೆಯಲ್ಲಿರುವ ಬಂಟರ ಸಂಘಗಳು ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದಾಗ ಸಮಾಜದಲ್ಲಿ ಬಡತನದಲ್ಲಿರುವ ಕುಟುಂಬಗಳಿಗೆ ಮತ್ತಷ್ಟು ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ನುಡಿದರು.
ಅವರು ಬಂಟ್ಸ್ ಹಾಸ್ಟೇಲ್‌ನಲ್ಲಿರುವ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಿದ ಸಮಾಜ ಕಲ್ಯಾಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು.
ಏನೇ ಕಷ್ಟವಿದ್ದರೂ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ತಿಳಿಸಿ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಒಕ್ಕೂಟದ ಪ್ರಮುಖ ಧ್ಯೇಯವಾಗಿದೆ. ಇಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಪ್ರತಿ ತಿಂಗಳು ಆರ್ಥಿಕ ಕಷ್ಟದಲ್ಲಿರುವ ಫಲಾನುಭವಿಗಳಿಗೆ ಸಹಾಯಧನ ವಿತರಿಸುತ್ತಿದೆ.
ಕೊರೋನ ಲಾಕ್ಡೌನ್ ಸಂದರ್ಭದಲ್ಲೂ 1.5 ಕೋಟಿ ರೂ ಗಳಷ್ಟು ಹಣವನ್ನು ದಾನಿಗಳಿಂದ ಸಂಗ್ರಹಿಸಿ ಕಷ್ಟದಲ್ಲಿದವರಿಗೆ ನೀಡಿದ್ದೇವೆ. ಉಳ್ಳವರಿಂದ ಸಂಗ್ರಹಿಸಿ ಇಲ್ಲದವರಿಗೆ ನೀಡುವುದು ಒಕ್ಕೂಟದ ಕಾರ್ಯ. ನಮ್ಮ ಶಕ್ತಿಯಾನುಸಾರ ಮುಂದೆಯೂ ಸಹಾಯ ಮಾಡಲಿದ್ದೇವೆ ಎಂದರು. ದಾನಿಗಳಿಲ್ಲದೆ ನಾವು ಎನೂ ಮಾಡಲು ಸಾಧ್ಯವಿಲ್ಲ, ದಾನಿಗಳು ನೀಡಿದ ಹಣವನ್ನು ಒಕ್ಕೂಟಕ್ಕೆ ಬಂದ ಅರ್ಜಿಗಳನ್ನು ಪರಿಶೀಲಿಸಿ ಸಹಾಯಧನ ನೀಡುತ್ತಿದ್ದೇವೆ ಎಂದರು.
ಬೆಂಗಳೂರು ಬಂಟರ ಸಂಘದ ದಿ. ಮುಲ್ಕಿ ಸುಂದರರಾಮ್ ಶೆಟ್ಟಿ ಸ್ಮಾರಕ ಪ್ರಶಸ್ತಿ ಪುರಸ್ಕೃತ ಐಕಳ ಹರೀಶ್ ಶೆಟ್ಟಿ ಅವರನ್ನು ಒಕ್ಕೂಟದ ಪದಾಧಿಕಾರಿಗಳು, ವಿವಿಧ ಬಂಟರ ಸಂಘಗಳ ಪ್ರಮುಖರು ತಮ್ಮ ಅಭಿಮಾನ ದ್ಯೋತಕವಾಗಿ ಸನ್ಮಾನಿಸಿ ಅಭಿನಂದಿಸಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅಂತರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕಟೀಲ್, ಪತ್ರಕರ್ತರಾದ ವಿದ್ಯಾಧರ ಶೆಟ್ಟಿ ಹಾಗೂ ಅಶೋಕ ಶೆಟ್ಟಿ ಬ್ರಹ್ಮರಕೂಟ್ಲು ಅವರನ್ನು ಸನ್ಮಾನಿಸಲಾಯಿತು.
ಒಕ್ಕೂಟದ ಪೋಷಕರು, ಥಾಣೆ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ ಅವರನ್ನು ಮತ್ತು ಕಾರ್ಪೋರೇಟರ್ ಪ್ರವೀಣ್ ಚಂದ್ರ ಆಳ್ವಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಹಾಯಧನ ವಿತರಣೆ:
ಒಕ್ಕೂಟದ ಸಮಾಜ ಕಲ್ಯಾಣ ಯೋಜನೆಯಡಿಯಲ್ಲಿ ವೈದ್ಯಕೀಯ, ಹೆಣ್ಮಕ್ಕಳ ವಿವಾಹ ಸಹಾಯ, ವಸತಿ ಸಹಾಯಹಸ್ತ ಹಾಗೂ ಇನ್ನಿತರ ಆರ್ಥಿಕ ಕಷ್ಟದಲ್ಲಿರುವ ಸುಮಾರು 30 ಫಲಾನುಭವಿಗಳಿಗೆ 5 ಲಕ್ಷ ರೂಪಾಯಿಗೂ ಮಿಕ್ಕಿದ ಸಹಾಯಧನದ ಚೆಕ್ ವಿತರಿಸಲಾಯಿತು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕಾರ ಶೆಟ್ಟಿ ಪ್ರಸ್ತಾವಿಕ ಮಾತುಗಳ್ನಾಡಿದರು. ಸಿಂಧ್ಯಾ ಶೆಟ್ಟಿ ಪ್ರಾರ್ಥಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಸ್ವಾಗತಿಸಿ, ಒಕ್ಕೂಟದ ಜೊತೆ ಕಾರ್ಯದರ್ಶಿ ಸಂಕಬೈಲ್ ಸತೀಶ್ ಅಡಪ ವಂದಿಸಿದರು. ಶರತ್ ಶೆಟ್ಟಿ ನಿರೂಪಿಸಿದರು.