ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಚಂದ್ರೋದಯದ ಸಂದರ್ಭದಲ್ಲಿ ಅರ್ಘ್ಯಪ್ರಧಾನ ಮಾಡಲಾಯಿತು. ಮಂಗಳವಾರ ವಿವಿದೆಡೆ ಶ್ರೀ ಕೃಷ್ಣ ಲೀಲೋತ್ಸವ ವಿಟ್ಲಪಿಂಡಿಯನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಆಚರಿಸಲಾಗುತ್ತಿದೆ.
ಶ್ರೀ ಕೃಷ್ಣ ಮಠ:
ಶ್ರೀ ಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣ ದೇವರಿಗೆ ತುಳಸಿ ಅರ್ಚನೆ, ಮಹಾಪೂಜೆಯನ್ನು ನೆರವೇರಿಸಿ ನಂತರ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಗರ್ಭಗುಡಿಯೊಳಗೆ ಕೃಷ್ಣ ದೇವರಿಗೆ ಅರ್ಘ್ಯ ಪ್ರದಾನ ಮಾಡಿ ಚಂದ್ರೋದಯ ಸಮಯದಲ್ಲಿ ತುಳಸಿ ಕಟ್ಟೆಯಲ್ಲಿ ಚಂದ್ರನಿಗೆ ಅರ್ಘ್ಯ ನೀಡಿದರು. ನಂತರ ಭಕ್ತಾದಿಗಳಿಂದ ಅರ್ಘ್ಯಪ್ರಧಾನ ನಡೆಯಿತು.
ಅನಂತ ವೈದಿಕ ಕೇಂದ್ರ:
ಉಡುಪಿಯ ಅನಂತ ವೈದಿಕ ಕೇಂದ್ರದಲ್ಲಿ ವೇದಮೂರ್ತಿ ಚೇಂಪಿ ರಾಮಚಂದ್ರ ಅನಂತ ಭಟ್ ನೇತೃತ್ವದಲ್ಲಿ ಸಪರಿವಾರ ಶ್ರೀ ಕೃಷ್ಣ ದೇವರಿಗೆ ತುಳಸಿ ಅರ್ಚನೆ, ಪುಷ್ಪಾಲಂಕಾರ ಪೂಜೆ, ಬಾಲಕೃಷ್ಣ ಪೂಜೆ, ಅರ್ಘ್ಯ ಪ್ರದಾನ ಮತ್ತು ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು.
ಕಾಪು ಶ್ರೀ ವೆಂಕಟರಮಣ ದೇಸ್ಥಾನ:
ಕಾಪು ಶ್ರೀ ವೆಂಕಟರಮಣ ದೇಸ್ಥಾನದಲ್ಲಿ ಸಹಸ್ರ ತುಳಸಿ ಅರ್ಚನೆಯ ನಂತರ ಅರ್ಘ್ಯಪ್ರಧಾನ ನಡೆಯಿತು.
ನಿತ್ಯಾನಂದ ಮಂದಿರ:
ಕವಿ ಮುದ್ದಣ ಮಾರ್ಗ ಇಲ್ಲಿಯ ಜಗದ್ಗುರು ಶ್ರೀನಿತ್ಯಾನಂದ ಮಂದಿರ- ಮಠದಲ್ಲಿ ಕ್ಷೇತ್ರದ ವಾಡಿಕೆಯಂತೆ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಮಂದಿರ ಮಠದ ಅಧ್ಯಕ್ಷರಾದ ಎರ್ಮಾಳ್ ಶಶಿಧರ್ ಕೆ. ಶೆಟ್ಟಿ ಅವರು ನಂದಾದೀಪ ಪ್ರಜ್ವಲಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂದಿರ ಮಠದ ಉಪಾಧ್ಯಕ್ಷ ಭೋಜರಾಜ್ ಆರ್ ಕಿದಿಯೂರ್, ವ್ಯವಸ್ಥಾಪಕ ಸುರೇಂದ್ರ ಶೆಟ್ಟಿ ಕೊರಂಗ್ರಪಾಡಿ, ಸದಸ್ಯ ದಿನಕರ ಅಲಂಕಾರ್, ಅರ್ಚಕ ಆರೂರು ಕೃಷ್ಣಮೂರ್ತಿ ಭಟ್ ಮೊದಲಾದವರು ಉಪಸ್ಥಿತರಿದ್ದರು. ಶ್ರೀ ನಿತ್ಯಾನಂದ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಪ್ರಸಾದ ವಿತರಣೆ ನಡೆಯಿತು.