ಉಡುಪಿ: ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ಇಲಾಖೆ, ಜಿಲ್ಲಾ ಕೌಶಲ್ಯ ಮಿಷನ್ ಹಾಗೂ ಉನ್ನತಿ ಕ್ಯಾರಿಯರ್ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಬುಧವಾರ ಉಡುಪಿ ನಗರದ ಸಿ.ಎಮ್.ಕೆ.ಕೆ.ವೈ ತರಬೇತಿ ಪಾಲುದಾರ ಸಂಸ್ಥೆಯಾದ ಉನ್ನತಿ ಕ್ಯಾರಿಯರ್ ಅಕಾಡೆಮಿಯ ಕ್ಯಾಂಪಸ್ ನಲ್ಲಿ ಜರುಗಿತು. ಈ ಮೇಳದಲ್ಲಿ ಜಿಲ್ಲೆಯ ಸಾವಿರಕ್ಕೂ ಹೆಚ್ಚಿನ ಐಟಿಐ, ಡಿಪ್ಲೊಮಾ, ಪದವಿ, ಎಂಜಿನೀಯರಿಂಗ್, ಪಿಯುಸಿ ಅಭ್ಯರ್ಥಿಗಳಿಗೆ 3 ಸಂದರ್ಶನದ ಅವಕಾಶ ಕಲ್ಪಿಸಲಾಗಿತ್ತು.
ಜಿಲ್ಲಾಧಿಕಾರಿ ಜಿ.ಜಗದೀಶ್ ಭೇಟಿ ನೀಡಿ, ಉದ್ಯೋಗ ಮೇಳದ ವ್ಯವಸ್ಥೆ ಹಾಗೂ ಕಂಪೆನಿಗಳ ಭಾಗವಹಿಸುವಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉನ್ನತಿ ಸಂಸ್ಥಾಪಕರಾದ ಪ್ರೇಮ್ ಪ್ರಸಾದ್ ಶೆಟ್ಟಿ, ದೇಶದ ಜನಸಂಖ್ಯೆಯಲ್ಲಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಶಕ್ತಿ ಶೇ.65 ರಷ್ಟು ಇರುವ ಈ ಕಾಲಘಟ್ಟದಲ್ಲಿ ಇವರೆಲ್ಲರನ್ನೂ ಕೌಶಲ್ಯಭರಿತರನ್ನಾಗಿಸುವ ಬಹುದೊಡ್ಡ ಜವಾಬ್ದಾರಿ ನಮ್ಮೆಲ್ಲರದ್ದು. ಯುವ ಶಕ್ತಿಯ ಸದುಪಯೋಗ ರಾಷ್ಟ್ರದ ಏಳಿಗೆಗೆ ದೊರಕಲು ಇಂತಹ ಮೇಳಗಳು ಅತ್ಯಂತ ಸಹಕಾರಿಯಾಗಲಿವೆ. ಕಳೆದೆರಡು ವರ್ಷದಿಂದ ಕೊರೊನಾ ಪ್ರಭಾವದಿಂದಾಗಿ ಅನೇಕ ಅಭ್ಯರ್ಥಿಗಳು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದು ಹಾಗೂ ಹೊಸ ಉದ್ಯೋಗವಕಾಶದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಈ ಉದ್ಯೋಗ ಮೇಳವು ಉತ್ತಮ ವೇದಿಕೆಯಾಯ್ತು ಎಂದು ತಿಳಿಸಿದರು.
ಉನ್ನತಿಯ ನಿರ್ದೇಶಕಿ ಪೌರ್ಣಮಿ ಪ್ರೇಮ್ ಶೆಟ್ಟಿ, ಜಿಲ್ಲಾ ಕೌಶಲ್ಯಾಧಿಕಾರಿ ಉದಯ್ ಶಂಕರ್, ಜಿಲ್ಲಾ ಸಮಾಲೋಚಕ ಜಗತ್, ವಿವಿಧ ಕಂಪೆನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಈ ಮೇಳದಲ್ಲಿ ಸ್ಥಳೀಯ ಹಾಗೂ ಮೆಟ್ರೋ ನಗರಗಳ 25 ಕಂಪೆನಿಗಳು ಭಾಗವಹಿಸಿ 300ಕ್ಕೂ ಹೆಚ್ಚಿನ ಅಭ್ಯರ್ಥಿಗಳಿಗೆ ಆಫರ್ ಲೆಟರ್ ಹಾಗೂ ಶಾರ್ಟ್ ಲಿಸ್ಟ್ ಮಾಡಲಾಯಿತು.