ತೆಂಕನಿಡಿಯೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಐಕ್ಯೂಎಸಿ ಮತ್ತು ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸಂಶೋಧನೆಯಲ್ಲಿ ನೈತಿಕ ಜವಾಬ್ದಾರಿ ವಿಚಾರ ಸಂಕಿರಣ ವರ್ಚುವಲ್ ಮಾಧ್ಯಮದ ಮೂಲಕ ನಡೆಯಿತು. ಎಸ್.ಎಂ.ಎಸ್. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ವೈ. ರವೀಂದ್ರನಾಥ ರಾವ್ ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡಿದರು. ಸಂಶೋಧನೆಯಲ್ಲಿ ನೈತಿಕತೆಯ ಅಗತ್ಯತೆಯ ಕುರಿತು ಉದಾಹರಣೆ ಸಹಿತ ವಿವರಿಸಿದ ಅವರು, ಸಂಶೋಧನಾ ವಿದ್ಯಾರ್ಥಿಗಳು ಆರಂಭದಲ್ಲಿ ಸಂಶೋಧನೆಯ ಕುರಿತು ಹೊಂದಿದ ಆಸಕ್ತಿಯು ಕ್ರಮೇಣವಾಗಿ ಹೆಚ್ಚಾದರೆ ಮಾತ್ರ ಪರಿಣಾಮಕಾರಿಯಾಗಿ ಕ್ಷೇತ್ರಕಾರ್ಯ ನಡೆಸಬಹುದು. ಕ್ಷೇತ್ರಕಾರ್ಯದಲ್ಲಿ ಕರ್ತವ್ಯನಿಷ್ಠೆ ಇದ್ದಲ್ಲಿ ಮಾತ್ರ ಅಧ್ಯಯನದ ಮೂಲಕ ಬೆಳಕಿಗೆ ಬಂದ ವಿಚಾರವನ್ನು ನಿರ್ಭೀತಿಯಿಂದ ಪ್ರಸ್ತುತಪಡಿಸಲು ಸಾಧ್ಯವಾಗುತ್ತದೆ. ಸಂಶೋಧನಾ ವರದಿಯು ಸರಕಾರಕ್ಕೆ, ಸಂಬಂಧಪಟ್ಟ ಇಲಾಖೆಗಳಿಗೆ ಉಪಯುಕ್ತವಾಗಿ ಮುಂದಿನ ಯೋಜನೆ ರೂಪಿಸಲು ದಾರಿದೀಪವಾದರೆ ಮಾತ್ರ ಸಂಶೋಧನೆ ಅರ್ಥಪೂರ್ಣವಾಗಿ ಅದಕ್ಕೊಂದು ಮಹತ್ವ ಬರುವುದು.
ವಸ್ತುನಿಷ್ಠ ಮಾಹಿತಿಯನ್ನು ಕಲೆ ಹಾಕಿದರೆ ಮಾತ್ರ ಸಂಶೋಧನೆ ವರದಿ ಅತ್ಯಾಕರ್ಷಕವಾಗಿ ಮೂಡಿಬರುವುದು. ಸಂಶೋಧನಾ ವಿದ್ಯಾರ್ಥಿ ಅಧ್ಯಯನದ ಸಂದರ್ಭದಲ್ಲಿ ಎಲ್ಲಾ ವಿಷಯಗಳಿಗೆ ಮುಕ್ತವಾಗಿ ತೆರೆದುಕೊಂಡರೆ ಮಾತ್ರ ಅಧ್ಯಯನ ಅರ್ಥಪೂರ್ಣವಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಗಣನಾಥ ಶೆಟ್ಟಿ ಎಕ್ಕಾರ್, ಸಂಶೋಧನೆಯ ಸಂದರ್ಭದಲ್ಲಿ ವಿದ್ಯಾರ್ಥಿ ಸೃಜನಶೀಲವಾಗಿ ಆಲೋಚಿಸಿ ಕ್ರಿಯಾಶೀಲತೆಯಿಂದ ಕ್ಷೇತ್ರಕಾರ್ಯ ನಡೆಸಿದರೆ ಮಾತ್ರ ಸಂಶೋಧನೆಗೆ ನೈಜ ಅರ್ಥ ಬರುತ್ತದೆ. ತಂತ್ರಜ್ಞಾನದ ಸದ್ಬಳಕೆಯನ್ನು ಮಾಡಿಕೊಂಡರೆ ಕ್ಲಪ್ತ ಸಮಯದೊಳಗೆ ಹಾಕಿಕೊಂಡ ಉದ್ದೇಶಗಳಿಗನುಸಾರವಾಗಿ ಸಂಶೋಧನೆಯ ವರದಿಯನ್ನು ತಯಾರಿಸಬಹುದು. ಕ್ಷೇತ್ರಕಾರ್ಯಕ್ಕೆ ಹೆಚ್ಚು ಮಹತ್ವ ನೀಡಿದರೆ ಮಾತ್ರ ಸಂಶೋಧನೆಯ ಮೌಲ್ಯ ಹೆಚ್ಚಾಗಿ ವರದಿಯಿಂದ ಬಂದ ಫಲಿತಗಳನ್ನು ಸಮಾಜದ ಏಳಿಗೆಗೆ ಅನುಷ್ಠಾನಿಸಲು ಪೂರಕ ವಾತಾವರಣ ನಿರ್ಮಾಣವಾಗುತ್ತದೆ ಎಂದರು.
ಐಕ್ಯೂಎಸಿ ಸಂಯೋಜಕ ಡಾ| ಸುರೇಶ್ ರೈ, ಸಮಾಜಕಾರ್ಯ ವಿಭಾಗ ಮುಖ್ಯಸ್ಥ ಡಾ| ದುಗ್ಗಪ್ಪ ಕಜೆಕಾರ್, ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ರಾಘವ ನಾಯ್ಕ್, ಸಮಾಜಶಾಸ್ತ್ರ ವಿಭಾಗ ಸಹಪ್ರಾಧ್ಯಾಪಕಿ ಡಾ| ಸುನೀತಾ ವಿ. ಉಪಸ್ಥಿತರಿದ್ದರು. ಆಂಗ್ಲಭಾಷಾ ಪ್ರಾಧ್ಯಾಪಕಿ ಶರ್ಮಿಳಾ ಹಾರಾಡಿ ನಿರೂಪಿಸಿದರು. ದೇಶದ ನಾನಾ ಭಾಗಗಳಿಂದ ಸಂಶೋಧಕರು, ಸಂಶೋಧನಾ ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿದರು.