ನವದೆಹಲಿ: 24 ಗಂಟೆಗಳಲ್ಲಿ ದೇಶಾದ್ಯಂತ 43,509 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ 38,465 ಮಂದಿ ಕಳೆದ 24 ತಾಸಿನಲ್ಲಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟು 4,03,840 ಸಕ್ರಿಯ ಪ್ರಕರಣಗಳಿವೆ. ಚೇತರಿಕೆ ಪ್ರಮಾಣ ಶೇ. 97.38 ರಷ್ಟಿದೆ ಎಂದು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ತಿಳಿಸಿದೆ.
ಅರ್ಧದಷ್ಟು ಕೇರಳದಲ್ಲಿ! ದೇಶದಲ್ಲಿ ಗುರುವಾರ ಕಂಡುಬಂದಿರುವ ದೈನಂದಿನ ಪಾಸಿಟಿವ್ ಪ್ರಕರಣಗಳಲ್ಲಿ ಶೇ. 50 ರಷ್ಟು ಪಾಸಿಟಿವ್ ಪ್ರಕರಣಗಳು ಕೇರಳದಲ್ಲೇ ವರದಿಯಾಗಿವೆ. ಕೇರಳದಲ್ಲಿ 22,056 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು ಸೋಂಕು ನಿಯಂತ್ರಣ ಕ್ರಮಗಳು ಪರಿಣಾಮಕಾರಿಯಾಗಿಲ್ಲ ಎಂದು ಕೇರಳ ಸರಕಾರಕ್ಕೆ ಕೇಂದ್ರ ಬುದ್ಧಿಮಾತು ಹೇಳಿದ್ದು, ಕೇಂದ್ರದಿಂದ ತಜ್ಞರ ತಂಡ ಕೇರಳಕ್ಕೆ ಹೊರಟಿದೆ.
ರಾಜ್ಯಕ್ಕೆ ತಲೆನೋವು! ಕೇರಳದಿಂದ ರಾಜ್ಯಕ್ಕೆ ಆಗಮಿಸುವವರು ಕಟ್ಟುನಿಟ್ಟಾಗಿ ಮುಂಜಾಗ್ರತಾ ಕ್ರಮಗಳನ್ನು ಪಾಲಿಸದಿದ್ದಲ್ಲಿ ನೆರೆಯ ಕರ್ನಾಟಕದ ಪಾಸಿಟಿವ್ ಪ್ರಕರಣಗಳಲ್ಲಿ ಕೂಡ ಏರುಪೇರಾಗುವ ಎಲ್ಲಾ ಸಾಧ್ಯತೆಗಳಿವೆ.
ಸಂಪೂರ್ಣ ಲಾಕ್ ಡೌನ್: ಹೆಚ್ಚುತ್ತಿರುವ ಪಾಸಿಟಿವ್ ಪ್ರಕರಣಗಳ ಹಿನ್ನಲೆಯಲ್ಲಿ ಜುಲೈ 31 ಹಾಗೂ ಆಗಸ್ಟ್ 1ರಂದು ಕೇರಳದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆಯಾಗಿದೆ.