ಮಂಗಳೂರು: ಕದ್ರಿ ಯೋಧ ಸ್ಮಾರಕದಲ್ಲಿ ಸೋಮವಾರ ಕಾರ್ಗಿಲ್ ವಿಜಯ ದಿನದ ಪ್ರಯುಕ್ತ ಯೋಧರಿಗೆ ನುಡಿನಮನ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಕಾರ್ಗಿಲ್ ಯುದ್ಧದಲ್ಲಿ ಅನೇಕ ಯೋಧರು ಬಲಿದಾನ ಮಾಡಿದ್ದಾರೆ. ಅವರೆಲ್ಲರನ್ನೂ ರಾಜಕೀಯ ರಹಿತವಾಗಿ ಗೌರವಿಸುವ ಕೆಲಸವಾಗಬೇಕು. ಮಾತೃಭೂಮಿಯ ರಕ್ಷಣೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಯೋಧರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಭಾರತ ಎಂದೆಂದಿಗೂ ಶಾಂತಿಯನ್ನು ಬಯಸುವ ರಾಷ್ಟ್ರ. ಆದರೆ ಅದನ್ನು ಅಸಹಾಯಕತೆ ಎಂದು ಭಾವಿಸಿದರೆ ಕಾರ್ಗಿಲ್ ಕದನ, ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ಮೇಲಿನ ದಾಳಿಯ ಮೂಲಕ ಸೇನಾ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿಕೊಡುವಲ್ಲಿ ಭಾರತೀಯ ಸೇನೆ ಸಮರ್ಥವಾಗಿದೆ ಎಂದರು. ಕದ್ರಿಯ ಯೋಧ ಸ್ಮಾರಕದ ಅಭಿವೃದ್ಧಿಗೆ 25 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗುವುದು. ಮೇಲ್ಛಾವಣಿ, ಬೆಳಕಿನ ವ್ಯವಸ್ಥೆ, ಸೌಂಡ್ ಸಿಸ್ಟಮ್, ಕಾರಂಜಿಗಳ ಅಭಿವೃದ್ಧಿ ಸೇರಿದಂತೆ ಯೋಧ ಸ್ಮಾರಕದ ಸಮಗ್ರ ಅಭಿವೃದ್ಧಿಗೆ ಅನುದಾನ ವಿನಿಯೋಗಿಸಲಾಗುವುದು ಎಂದು ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ಶಕಿಲಾ ಕಾವಾ, ಸೈನಿಕರ ಸಂಘದ ಉಪಾಧ್ಯಕ್ಷ ಶ್ರೀಕಾಂತ್ ಶೆಟ್ಟಿ ಬಾಳ, ಕಾರ್ಯದರ್ಶಿ ಕ್ಯಾಪ್ಟನ್ ದೀಪಕ್ ಅಡ್ಯಂತಾಯ, ಸಂಘದ ನಿಕಟಪೂರ್ವ ಅಧ್ಯಕ್ಷ ವಿಕ್ರಮ್ ದತ್ತ, ಹಿರಿಯ ಅಧಿಕಾರಿಗಳಾದ ಬ್ರಿಗೇಡಿಯರ್ ಐ.ಎನ್ ರೈ, ಕರ್ನಲ್ ಎನ್.ಶರತ್ ಭಂಡಾರಿ, ಕರ್ನಲ್ ಜಯಚಂದ್ರನ್, ರೂಪಾ.ಡಿ ಬಂಗೇರ, ಪೂಜಾ ಪೈ, ಪ್ರಶಾಂತ್ ಪೈ, ರೋಟರಿ ಪ್ರಮುಖರಾದ ಜೆ.ಪಿ ರೈ, ಲಯನ್ಸ್ ಪ್ರಮುಖರಾದ ವಿಜಯ ವಿಷ್ಣು ಮಯ್ಯ ಮೊದಲಾದವರು ಉಪಸ್ಥಿತರಿದ್ದರು.