ಇಡೀ ಕರ್ನಾಟಕದ ಆರುವರೆ ಕೋಟಿ ಜನರನ್ನು ತುದಿಗಾಲಲ್ಲಿ ನಿಲ್ಲಿಸಿದ ಯಡಿಯೂರಪ್ಪನವರು ಕೊನೆಗೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಮೂಲಕ ಬಿಜೆಪಿ ಹೈಕಮಾಂಡಿಗೂ ರಾಜ್ಯದಲ್ಲಿ ತನ್ನ ವಿರೋಧಿಸುವ ಸ್ವಪಕ್ಷೀಯ ನಾಯಕರುಗಳಿಗೂ ಅತ್ಯಂತ ಮೃದುವಾದ ಮಾರ್ಮಿಕವಾದ ನಡೆ ನುಡಿಯ ಮೂಲಕ ಎಚ್ಚರಿಕೆಯ ಸಂದೇಶವನ್ನು ರವಾನಿಸಿರುವುದು ಅಷ್ಟೇ ಸತ್ಯ.
ರಾಜೀನಾಮೆ ಕೊಟ್ಟು ಹೊರಗೆ ಬಂದ ಯಡಿಯೂರಪ್ಪನವರ ಮಾತನ್ನು ಅತೀ ಸೂಕ್ಷ್ಮವಾಗಿ ಗಮನಿಸಿದಾಗ ಅವರ ಮಾತಿನಲ್ಲಿ ಅತಿಯಾದ ವಿನಯತೆ, ಮೃದುತ್ವ ಮಾತ್ರವಲ್ಲ ಪಕ್ಷಕ್ಕಾಗಲಿ ಉನ್ನತ ನಾಯಕರಿಗಾಗಲಿ ಎಲ್ಲಿಯು ನೋವಾಗದಂತೆ ತನ್ನ ರಾಜೀನಾಮೆಗೆ ನಾನೇ ಕಾರಣ ಅನ್ನುವ ರೀತಿಯಲ್ಲಿ ಬೆಣ್ಣೆಯಲ್ಲಿ ನೂಲು ತೆಗೆದ ರೀತಿಯಲ್ಲಿ ಮಾತನಾಡಿದ್ದಾರೆ. ಅಂದರೆ ಇದರ ಅರ್ಥ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಸಂಪೂರ್ಣ ತೃಪ್ತರಾಗಿ ರಾಜಕೀಯ ಸಾಕಪ್ಪಾ ಅನ್ನುವ ತರದಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದರೆ ಅದರಷ್ಟು ಮೂರ್ಖ ಇನ್ನೊಂದಿಲ್ಲ.
ಒಂದಂತೂ ಸತ್ಯ.. ಯಡಿಯೂರಪ್ಪನವರಿಗೆ ತಾನು ರಾಜೀನಾಮೆ ಕೊಡಲೇಬೇಕಾದ ಸಂದರ್ಭ ಬಂದೇ ಬರುತ್ತೆ ಅನ್ನುವುದು ಸುಮಾರು ಎರಡು ತಿಂಗಳ ಹಿಂದೆ ತಿಳಿದಿತ್ತು ಅನ್ನುವುದು ನೂರಕ್ಕೆ ನೂರು ಸತ್ಯ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ತಾನು ಯಾರು? ತಾನು ಒಪ್ಪಿ ಅಪ್ಪಿಕೊಂಡು ಬಂದ ತನ್ನ ಲಿಂಗಾಯತ ಸಮಾಜ ತನ್ನ ಮೇಲೆ ಎಷ್ಟು ವಿಶ್ವಾಸ ಭರವಸೆ ಇಟ್ಟುಕೊಂಡು ಬಂದಿದ್ದಾರೆ ಅನ್ನುವುದನ್ನು ತನ್ನ ಪಕ್ಷದ ಉನ್ನತ ನಾಯಕರುಗಳಿಗೂ ತೋರಿಸಬೇಕಾದ ವೇದಿಕೆಯನ್ನು ತಯಾರು ಮಾಡಿ ತೋರಿಸಿಯೇ ಬಿಟ್ಟರು ಮಾತ್ರವಲ್ಲ ಜೊತೆಗೆ ತಾನು ಆಪತ್ತು ಕಾಲಕ್ಕೆ ಸ್ಪಂದಿಸುವ ಏಕೈಕ ಜನ ನಾಯಕ ಅನ್ನುವುದನ್ನು ಕೂಡ ರಾಜಿನಾಮೆ ನೀಡುವ ಮುನ್ನ ದಿನವೇ ಜನಮಾನಸದಲ್ಲಿ ತುಂಬಿಸಿಬಿಟ್ಟರು.
ಯಡಿಯೂರಪ್ಪನವರ ಈ ನೋವಿನ ರಾಜೀನಾಮೆ ಬಿಜೆಪಿಯ ಮುಂದಿನ ಚುನಾವಣೆಗಳ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು? ಅನ್ನುವುದು ನಮ್ಮ ಮುಂದಿರುವ ಬಹುದೊಡ್ಡ ಪ್ರಶ್ನೆ ?
1. ಕರ್ನಾಟಕದಲ್ಲಿ ಪಕ್ಷ ಕಟ್ಟಿ ಬೆಳಸಿ ಪಕ್ಷಕ್ಕೆ ತಾಯಿ ಬೇರಿನಂತಿದ್ದ ಯಡಿಯೂರಪ್ಪನವರ ರಾಜಕೀಯ ಬದುಕಿನ ಕೊನೆಯ ಅವಧಿಯಲ್ಲಿ ಕೇವಲ ಒಂದು ವರುಷ ಒಂಭತ್ತು ತಿಂಗಳು ಇರುವಾಗಲೇ ಅಧಿಕಾರದಿಂದ ಕೆಳಗಿಳಿಸಿರುವ ಸಂದರ್ಭ ರಾಜ್ಯದ ಪ್ರಬಲ ರಾಜಕೀಯ ಶಕ್ತಿ ಅನ್ನಿಸಿಕೊಂಡಿರುವ ಲಿಂಗಾಯತ ಸಮುದಾಯದವರ ಮನಸ್ಸಿಗೆ ನೋವಾಗಿರುವುದು ಅಷ್ಟೇ ಸತ್ಯ.
2. ಬಹು ಹಿಂದೆ ಇದೇ ಲಿಂಗಾಯಿತರು ವಿರೇಂದ್ರ ಪಾಟೀಲ್ ರನ್ನು ಅನಾರೋಗ್ಯ ಕಾರಣ ನೀಡಿ ಅಧಿಕಾರದಿಂದ ಕೆಳಗಿಳಿಸಿದ ಸಿಟ್ಟನ್ನು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ಹೇಗೆ ತೋರಿಸಿದರೋ, ಅದೇ ಸಿಟ್ಟನ್ನು ಮತ್ತೆ ಬಿಜೆಪಿ ಮೇಲೆ ತೋರಿಸಿದರೂ ಆಶ್ಚರ್ಯವಿಲ್ಲ?
3. ಕರ್ನಾಟದ ಮಟ್ಟಿಗೆ “ಮಾಸ್ ಲೀಡರ್” ಅಂತ ವ್ಯಕ್ತಿತ್ವ ಬೆಳೆಸಿಕೊಂಡಿದ್ದರೆ ಅದು ಕೇವಲ ಇಬ್ಬರು ಮಾತ್ರ. ಬಿಜೆಪಿಯಲ್ಲಿ ಯಡಿಯೂರಪ್ಪ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಅನ್ನುವುದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಹಾಗಿರುವಾಗ ಇಂತಹ “ಮಾಸ್ ಲೀಡರ್” ಯಡಿಯೂರಪ್ಪನವರನ್ನು ಮನನೋಯಿಸುವ ತರದಲ್ಲಿ ಬದಿಗೆ ಸರಿಸಿ ಮುಂದಿನ ದಿನಗಳಲ್ಲಿ ಬಿಜೆಪಿ ಚುನಾವಣೆಯಲ್ಲಿ ಗೆದ್ದು ಬರಲು ಸಾಧ್ಯವೇ?
4. ಇಲ್ಲಿ ಯಾರು ಎಣಿಸದ ತರದಲ್ಲಿ ಅತ್ಯಂತ ಸಜ್ಜನಿಕೆಯಿಂದ ರಾಜೀನಾಮೆ ಕೊಟ್ಟು ಬಂದ ಯಡಿಯೂರಪ್ಪನವರ ರಾಜಕೀಯ ಆಟ ಇಲ್ಲಿಗೆ ಇತಿಶ್ರೀ ಆಯಿತು ಅಂತ ಬಿಜೆಪಿ ಉನ್ನತ ನಾಯಕರು ಭಾವಿಸಿಕೊಂಡರೆ ಮುಂದಿನ ಚುನಾವಣೆಯಲ್ಲಿ ಎಡವಿ ಬೀಳುವುದು ಶತಃ ಸಿದ್ದ.
5. ಯಡಿಯೂರಪ್ಪನವರ ಹೇಳಿಕೆಗಳನ್ನು ಮತ್ತೆ ಒಳಹೊಕ್ಕಿ ಸೂಕ್ಷ್ಮವಾಗಿ ಗಮನಿಸಿ ಕರ್ನಾಟಕದಲ್ಲಿ ಪಕ್ಷ ಮತ್ತೆ ಅಧಿಕಾರ ತರಬೇಕು; ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುವೆ, ಮುಂತಾದ ಹೇಳಿಕೆ ಏನನ್ನು ಪ್ರತಿ ಬಿಂಬಿಸುತ್ತದೆ ಅಂದರೆ ತನ್ನ ವಂಶಾವಳಿ ಕುಡಿಗಳನ್ನು ರಾಜ್ಯದಲ್ಲಿ ಮತ್ತೆ ಯಡಿಯೂರಪ್ಪನವರ ಸ್ಥಾನಕ್ಕೆ ಏರಿಸಬೇಕು.. ಎಲ್ಲೂ ಇದಕ್ಕೆ ಚ್ಯುತಿ ಬಾರದ ತರದಲ್ಲಿ ರಾಜ್ಯ ರಾಜಕೀಯ ನಡೆಯಬೇಕೆಂಬ ಕನಸು ಅವರ ಮೃದುತ್ವದ ನಡೆ ನುಡಿಯಲ್ಲಿ ಖಾತ್ರಿಯಾಗಿದೆ. ಇದನ್ನು ಬಿಜೆಪಿ ಉನ್ನತ ನಾಯಕರುಗಳು ಯಾವ ರೀತಿಯಲ್ಲಿ ಸ್ವೀಕರಿಸಬಹುದು? ಇನ್ನೊಂದು ದೊಡ್ಡ ಸವಾಲು?
6. ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಅನ್ನುವ ಪ್ರಶ್ನೆ ಬಂದಾಗ ಇನ್ನೊಬ್ಬ ಲಿಂಗಾಯತ ಇಲ್ಲಿ ಮುಖ್ಯಮಂತ್ರಿಯಾಗುವುದನ್ನು ಯಡಿಯೂರಪ್ಪನವರ ಒಳಮನಸ್ಸು ಖಂಡಿತವಾಗಿಯೂ ಒಪ್ಪಲು ಸಾಧ್ಯನೇ ಇಲ್ಲ. ಕಾರಣ ಬಹುಸರಳ. ತಾನು ನಂಬಿಕೊಂಡು ಬಂದ ಓಟ್ ಬ್ಯಾಂಕ್ ಕೈ ತಪ್ಪುವ ಸಾಧ್ಯತೆಯೂ ಇದೆ. ಹಾಗಾಗಿ ಪ್ರಹ್ಲಾದ ಜೋಷಿ ಅಂತರವನ್ನು ಸಹಿಸಿಕೊಂಡಾರೂ ಹೊರತು ತನ್ನ ಜಾತಿ ಅಲ್ಲ. ಇದು ಸತ್ಯ.
ಈ ಎಲ್ಲಾ ಹಿನ್ನಲೆಯಲ್ಲಿ ಬಿಜೆಪಿ ಅಳೆದು ತೂಗಿ ರಾಜ್ಯದಲ್ಲಿ ಮುಂದಿನ ರಾಜಕೀಯ ನಿರ್ಧಾರ ತೆಗೆದುಕೊಳ್ಳಬೇಕಾದ ವಾತಾವರಣ ಸೃಷ್ಟಿಯಾಗಿರುವುದಂತೂ ಸತ್ಯ.
-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ.
ಆಳವಾದ ವಿಶ್ಲೇಷಣೆ.
ಧನ್ಯವಾದಗಳು.