ಕಿನ್ನೌರ್/ ಹಿಮಾಚಲ ಪ್ರದೇಶ: ಪ್ರಕೃತಿ ಮುನಿದರೆ ಪರಿಸ್ಥಿತಿ ಹೇಗಿರುತ್ತದೆ ಎಂಬುದಕ್ಕೆ ಇಂದು ನಡೆದ ಘಟನೆಯೇ ಸಾಕ್ಷಿ!
ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಭೂಕುಸಿತದ ಕಾರಣ ಬೆಟ್ಟದ ತುದಿಯಿಂದ ಕೇವಲ 10 ಸೆಕೆಂಡುಗಳಲ್ಲಿ ನೂರಾರು ಬ್ರಹತ್ ಬಂಡೆಗಳು ಶರವೇಗದಲ್ಲಿ ಉರುಳುತ್ತಾ ಅಪ್ಪಳಿಸಿದ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿದ್ದು ಮೂವರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಬಟ್ಸೆರಿ ಸೇತುವೆ ಸಂಪೂರ್ಣ ಕುಸಿದಿದ್ದು ವಾಹನಗಳು ನಜ್ಜುಗುಜ್ಜಾಗಿವೆ.
ಕಿನ್ನೌರ್ ಜಿಲ್ಲಾಡಳಿತದೊಂದಿಗೆ ಮಾತನಾಡಿದ್ದೇನೆ, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹಿಮಾಚಲ ಪ್ರದೇಶದ ಸಿಎಂ ಜೈರಾಮ್ ಠಾಕೂರ್ ಘಟನೆಯ ನಂತರ ಪ್ರತಿಕ್ರಿಯೆ ನೀಡಿದ್ದಾರೆ.
ರಕ್ಷಣಾ ಕಾರ್ಯಾಚರಣೆ ನಡೆಸಲು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ತಂಡಗಳು ಕಿನ್ನೌರಿನ ಬಡ್ಸೆರಿ ಗ್ರಾಮಕ್ಕೆ ಧಾವಿಸಿವೆ. ಬಂಡೆ ಅಪ್ಪಳಿಸಿದ ಕಾರಣ ವಾಹನದಲ್ಲಿ ಪ್ರಯಾಣಿಸುತ್ತಿದ್ದ 12 ಜನರಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಸ್ಥಳೀಯರು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ಐಟಿಬಿಪಿ ಹೇಳಿದೆ.
ಹಿಮಾಚಲ ಪ್ರದೇಶದ ಕಿನ್ನೌರ್ ಘಟನೆಯಲ್ಲಿ ಸಾವನ್ನಪ್ಪಿದವರ ಸಂಬಂಧಿಕರಿಗೆ ಪಿಎಂಎನ್‌ಆರ್‌ಎಫ್‌ನಿಂದ ತಲಾ 2 ಲಕ್ಷ ರೂ., ಗಾಯಗೊಂಡವರಿಗೆ 50,000 ರೂ. ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.