ಕೋವಿಡ್-19 ಲಾಕ್‌ಡೌನ್ ಮೊದಲು ಖಾಸಗಿ ಬಸ್ ಟಿಕೆಟ್ ದರ 13 ರೂಪಾಯಿ ಇದ್ದದ್ದು ಮೊದಲ ಅಲೆ ನಂತರ 50% ಪ್ರಯಾಣಿಕರಿಗೆ ಅವಕಾಶ ನೀಡಿ ಕೊರೊನಾ ಮಾರ್ಗಸೂಚಿ ಅನುಸರಿಸಿ ಬಸ್ ಓಡಿಸಿದಾಗ 20 ರೂಪಾಯಿಯಾಯಿತು. ಲಾಕ್‌ಡೌನ್ ಸಡಿಲ ಆದಾಗಲೂ ಇಂಧನ ಬೆಲೆ ಏರಿಕೆಯ ನೆಪವೊಡ್ಡಿ ಯಾವುದೇ ಬಸ್‌ನವರೂ ಟಿಕೆಟ್ ದರವನ್ನು ಪೂರ್ವದರಕ್ಕೆ ಇಳಿಸಲಿಲ್ಲ. ಈಗ ಕೋವಿಡ್ 19 ಎರಡನೇ ಅಲೆಯ ಲಾಕ್‌ಡೌನ್ ಸಡಿಲಿಕೆ ಆದಾಗ ಪುನಃ 50% ಪ್ರಯಾಣಿಕರಿಗೆ ಬಸ್‌ನಲ್ಲಿ ಅವಕಾಶ ನೀಡುವ ಮಾರ್ಗಸೂಚಿ ಅನುಸರಿಸುವಾಗ ಶೇ.25 ಟಿಕೆಟು ದರ ಹೆಚ್ಚಿಸುವ ಸರಕಾರದ ನಿರ್ಧಾರವನ್ನು ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದ ಹಾಗೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಖಂಡಿಸಿದೆ.
ಕೆಲವೇ ತಿಂಗಳುಗಳಲ್ಲಿ ಎರಡು ಬಾರಿ ಬಸ್ ಟಿಕೆಟ್ ದರ ಏರಿಸುವುದು ಕಾನೂನು ಪ್ರಕಾರ ಸರಿಯೇ? ಕಳೆದೆರಡು ವರ್ಷಗಳಿಂದ ಖಾಸಗಿ ಬಸ್‌ಗಳ ದರ ಸುಮಾರು 100% ಜಾಸ್ತಿಯಾದ ಹಾಗಾಗುತ್ತದೆ. 13 ರೂಪಾಯಿ ಇದ್ದ ದರ ರೂ. 20 ಆಗಿ ಈಗ ರೂ. 25 ಆಗುವ ಸಾಧ್ಯತೆಯಿದೆ. ಬಸ್‌ನ ಮಾಲಿಕರಿಂದ ತೆರಿಗೆ ಪಡೆಯುವಾಗ ಅದರಲ್ಲಿ ನಿರ್ದಿಷ್ಟ ಮೊಬಲಗನ್ನು ಕಾದಿರಿಸಿ ಪ್ರಾಕೃತಿಕ ವಿಕೋಪ ಯಾ ಇಂಧನ ಬೆಲೆ ಮಿತಿ ಮೀರಿದಾಗ ಬಳಸುವ ಡೀಸೆಲ್‌ಗೆ ಸಬ್ಸಿಡಿ ನೀಡಿ, ಸರಕಾರ ಸಹಾಯ ಮಾಡಬೇಕು. ಅಲ್ಲದೆ 2 ಲಾಕ್‌ಡೌನ್ ಅವಧಿಯಲ್ಲಿ ಕಟ್ಟಬೇಕಾದ ತೆರಿಗೆಯನ್ನು ಸರಕಾರ ಸಂಪೂರ್ಣ ಮನ್ನಾ ಮಾಡಬೇಕು ಹಾಗೂ ಲಾಕ್‌ಡೌನ್ ಅವಧಿಯ ಬಸ್‌ನ ಸಾಲದ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಬೇಕು. ಸಂಕಷ್ಟದಲ್ಲಿರುವ ಬಸ್‌ನ ಚಾಲಕರು ಹಾಗೂ ನಿರ್ವಾಹಕರ ಖಾತೆಗೆ ಕನಿಷ್ಠ ಹತ್ತು ಸಾವಿರ ರೂಪಾಯಿಯನ್ನು ಸರಕಾರ ವರ್ಗಾಯಿಸುವಂತೆ ಬ್ಲಾಕ್ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ.
ಬಸ್ ಮಾಲಕರಿಗೆ, ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಸರಕಾರ ಯಾವುದೇ ಆರ್ಥಿಕ ನೆರವು ನೀಡದೇ ಎರಡು ಲಾಕ್‌ಡೌನ್ ಮುಕ್ತಾಯದ ಸಂದರ್ಭದಲ್ಲಿಯೂ ಬಸ್ ದರ ಏರಿಸುವ ಮೂಲಕ ಪೆಟ್ರೋಲ್ ಗ್ಯಾಸ್, ದಿನಸಿ ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಉಪಾಧ್ಯಕ್ಷ ಸದಾಶಿವ ಅಮೀನ್ ಕಟ್ಟೆಗುಡ್ಡೆ, ನಗರಸಭೆಯ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್, ನಗರಸಭಾ ಸದಸ್ಯ ವಿಜಯ ಪೂಜಾರಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ್ ಭಂಡಾರ್ಕಾರ್, ಬ್ಲಾಕ್ ಎಸ್.ಸಿ. ಘಟಕದ ಅಧ್ಯಕ್ಷ ಗಣೇಶ್ ನೆರ್ಗಿ, ಮಾಜಿ ನಗರಸಭಾ ಸದಸ್ಯರುಗಳಾದ ಶಶಿರಾಜ್ ಕುಂದರ್, ಸುಕೇಶ್ ಕುಂದರ್ ಪ್ರಕಟಣೆಯ ಮೂಲಕ ಖಂಡಿಸಿದ್ದಾರೆ.