ವಿಶ್ವದ ಅಗ್ರ ಶ್ರೇಯಾಂಕ ಆಟಗಾರ ನೊವಾಕ್ ಜೊಕೋವಿಕ್ ದ್ವಿತೀಯ ಬಾರಿಗೆ ಫ್ರೆಂಚ್ ಓಪನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಭಾನುವಾರ ನಡೆದ ಪುರುಷರ ಫೈನಲ್ ಪಂದ್ಯದಲ್ಲಿ ಗ್ರೀಸ್ ದೇಶದ ಸ್ಟಿಫಾನೋಸ್ ಸಿಟ್ಸಿಪಸ್ ವಿರುದ್ಧ 6-7, 2-6, 6-3, 6-2, 6-4 ಸೆಟ್ ಗಳ ಮೂಲಕ ಐತಿಹಾಸಿಕ ಗೆಲುವು ಸಾಧಿಸಿದ ಸರ್ಬಿಯಾದ ಜಾಕೋವಿಕ್ ತನ್ಮೂಲಕ 19 ಗ್ರಾಂಡ್ ಸ್ಲಾಂ ಪ್ರಶಸ್ತಿಗಳನ್ನು ಗೆದ್ದ ದಾಖಲೆ ನಿರ್ಮಿಸಿದರು.
ಮೊದಲ ಸೆಟ್ ನಲ್ಲಿ ಉಭಯ ಆಟಗಾರರು ಸಮಬಲದ ಹೋರಾಟ ನಡೆಸಿದರು. 22ರ ಹರೆಯದ ಸ್ಟಿಫಾನೋಸ್ ಸಿಟ್ಸಿಪಸ್ ಪಂದ್ಯದಲ್ಲಿ ರೋಚಕ ಪ್ರದರ್ಶನ ನೀಡಿದರೂ 34ರ ಹರೆಯದ ಜೊಕೋವಿಕ್ ಎದುರು ಮೊದಲ ಸೆಟ್ ಸೋತರು. ಎರಡನೆಯ ಸೆಟ್ ನಲ್ಲಿ ಸ್ಟಿಫಾನೋಸ್ ಸಿಟ್ಸಿಪಸ್ ರೋಚಕ ಪ್ರದರ್ಶನ ನೀಡಿದ ಫಲವಾಗಿ ಜೊಕೋವಿಕ್ ಗರಿಷ್ಠ ಅಂತರದಲ್ಲಿ ಸೋತರು. ಕೊನೆಯ ಮೂರು ಸೆಟ್ ಗಳಲ್ಲಿ ಜೊಕೋವಿಕ್ ತನ್ನ ನೈಜ ಶೈಲಿಯ ಆಟವನ್ನು ಅನಾವರಣಗೊಳಿಸಿ ಸ್ಟಿಫಾನೋಸ್ ಸಿಟ್ಸಿಪಸ್ ವಿರುದ್ಧ ಐತಿಹಾಸಿಕ ಗೆಲುವನ್ನು ಸಾಧಿಸಿದರು.
ಸೆಮಿಫೈನಲ್ ನಲ್ಲಿ ನಡಾಲ್ ವಿರುದ್ಧ ಜೊಕೋವಿಕ್ ಗೆದ್ದರೆ, ಜರ್ಮನಿಯ ಅಲೆಕ್ಸಾಂಡರ್ ವಿರುದ್ಧ ಸ್ಟಿಫಾನೋಸ್ ಸಿಟ್ಸಿಪಸ್ ಜಯಗಳಿಸಿದರು.